ಪ್ರಾಯಶ್ಚಿತ್ತ

ಪಾಪ ಪರಿಹಾರಕ್ಕೋಸ್ಕರ ಮಾಡಿಕೊಳ್ಳತಕ್ಕ ಕರ್ಮ ಬ್ರಾಹ್ಮಣಗಳಲ್ಲಿ ಇದರ ವಿವರಗಳಿವೆ. ಕರ್ತವ್ಯಲೋಪಕ್ಕೂ ಪಾಪ ಮಾಡಿದ್ದಕ್ಕೂ ಉಚಿತ ಪ್ರಾಯಶ್ಚಿತ್ತವಿದೆ. ಆಕಸ್ಮಿಕವಾದ ಯಜ್ಞಭಂಗಕ್ಕೂ ಇದನ್ನು ವಿಧಿಸಲಾಗಿದೆ. ಇದರ ಉದ್ದೇಶಗಳು ಪಾಪಿಗೆ ಮನಸ್ಸಿನ ಸಮಾಧಾನ, ಇತರರಿಗೆ ಅವನ ವಿಷಯದಲ್ಲಿ ಕ್ಷಮೆ, ಸಮಾಜದಲ್ಲಿ ಅವನಿಗೆ ಪುನಃ ಪುರಸ್ಕಾರ-ಇವುಗಳು. ಕೆಲವು ಸ್ಮøತಿಗಳಲ್ಲಿ ಅರಿಯದೆ ಮಾಡಿದ ಪಾಪಗಳಿಗೆ ಮಾತ್ರ ಪ್ರಾಯಶ್ಚಿತ್ತವಿದೆ. ಅರಿತು ಮಾಡಿದ ಪಾಪಕ್ಕೆ ಪರಿಹಾರವಿಲ್ಲವೆಂದು ಹೇಳಲಾಗಿದೆ. ಆದರೂ ಸಮಾಜದಲ್ಲಿ ಮನ್ನಣೆ ಪಡೆಯುವುದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಲೇ ಬೇಕೆಂದು ವಿಧಿಸಲಾಗಿದೆ.

	ತಪಸ್ಸು ಮಾಡಿ ಮರಣ ಹೊಂದಿದಾಗಲೇ ಕೆಲವು ಪಾಪಗಳಿಂದ ವಿಮೋಚನೆ ಉದಾ: ಗುರುವನ್ನು ಅಥವಾ ಬ್ರಾಹ್ಮಣನನ್ನು ವಧಿಸುವುದು. ಗುರುಪತ್ನಿಯಲ್ಲಿ ಅಪಚಾರವೆಸಗುವುದು. ಸ್ತ್ರೀಹತ್ಯೆ ಅಜನ್ಮ ಬ್ರಹ್ಮಚರ್ಯವನ್ನು ಸ್ವೀಕಾರಮಾಡಿ ಪತನಹೊಂದಿದವನಿಗೆ ಪ್ರಾಯಶ್ಚಿತ್ತವೇ ಇಲ್ಲ. ಅವನು ಸಮಾಜದಿಂದ ಬಹಿಷ್ಕøತನಾಗುತ್ತಾನೆಂದು ಯಾಜ್ಞವಲ್ಕ್ಯ ಸ್ಮøತಿ ಹೇಳಿದೆ. ರಾಜನಿಂದ ಅನುಭವಿಸುವ ಶಿಕ್ಷೆಗಿಂತಲೂ ಪ್ರಾಯಶ್ಚಿತ್ತ ಹೆಚ್ಚು ಮಹತ್ತ್ವವುಳ್ಳದ್ದು. ಅಪರಾಧಕ್ಕಿಂತಲೂ ಪಾಪ ಹೆಚ್ಚು ಕೆಡಕಾದದ್ದು. ಗೋವಧೆ, ಅವೇಳೆಯಲ್ಲಿ ನಿದ್ರೆ ಮುಂತಾದವುವನ್ನು ರಾಜ ಶಿಕ್ಷಿಸದಿದ್ದರೂ ಅವು ಪ್ರಾಯಶ್ಚಿತ್ತಾರ್ಹವಾದ ಪಾಪಗಳು. ಸಾರ್ವಜವಿಕ ಸ್ಥಳಗಳಿಗೆ (ಬಾವಿ, ಕೆರೆ, ಸೇತುವೆ) ಮುಂತಾದವಕ್ಕೆ ಘಾಸಿ ಮಾಡಿದವನಿಗೆ ದೇವಾಲಯ, ವಿಗ್ರಹ ಮೊದಲಾದವುವನ್ನು ಭೇದಿಸಿದವನಿಗೆ ತಪಸ್ಸು, ಜುಲ್ಮಾನೆ ಮುಂತಾದ ಪ್ರಾಯಶ್ಚಿತ್ತಗಳುಂಟು. ಕೊಲೆ ಮಾಡಿದವ ನೊಂದ ಕುಟುಂಬಕ್ಕೆ ಪರಿಹಾರ ಕೊಡಬೇಕು. ಮನು ಕೊಲೆಪಾತಕನಿಗೆ 12 ವರ್ಷ ಅರಣ್ಯವಾಸ ಭಿಕ್ಷೆಯಿಂದ ಜೀವನ, ಕೊನೆಗೆ ಪ್ರಾಣತ್ಯಾಗಗಳನ್ನು ವಿಧಿಸಿದ್ದಾನೆ. ಅಗ್ನಿಪ್ರವೇಶವನ್ನು ಕೆಲವು ಸ್ಮøತಿಗಳು ಹೇಳಿದೆ. ಪ್ರಾಯಶ್ಚಿತ್ತಕ್ಕೆ ದೇಶಕಾಲ ವಯಸ್ಸುಗಳ ತಾರತಮ್ಯವುಂಟು. ವಯಸ್ಸು 80ಕ್ಕೆ ಮೀರಿದ್ದರೆ 16ಕ್ಕೆ ಕೆಳಗಿದರೆ ರೋಗಿಯಾಗಿದ್ದರೆ ಸ್ತ್ರೀಯಾಗಿದ್ದರೆ ಕಠಿಣ ಪ್ರಾಯಶ್ಚಿತ್ತವಿಲ್ಲ. ಬೇರೆ ಬೇರೆ ವರ್ಣದವರಿಗೆ ಪ್ರಾಯಶ್ಚಿತ್ತದ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಅರಿತು ಮಾಡುವ ಪಾಪಕ್ಕೆ ದ್ವಿಗುಣವಾಗಿ ತಪಸ್ಸು ಮಾಡಬೇಕು. ಪ್ರಾಯಶ್ಚಿತ್ತಗಳನ್ನು ಧರ್ಮಶಾಸ್ತ್ರಪಾರಂಗತರೂ, ನಿಷ್ಪಕ್ಷಪಾತಿಗಳೂ ಶಿಷ್ಯರೂ ಆದ ಹಿರಿಯರ ಪರಿಷತ್ತಿನಲ್ಲಿ ತೀರ್ಮಾನಿಸಲಾಗುತ್ತದೆ.

	ರಾಜನ ಬ್ರಹ್ಮಹತ್ಯಾದೋಷಕ್ಕೆ ಅಶ್ವಮೇಧಯಾಗವೇ ಪ್ರಾಯಶ್ಚಿತ್ತ ಅಘಮರ್ಷಣ ಅತಿಶಾಂತಪನ, ಅತಿಕೃಚ್ಛ, ಅರ್ಧಕೃಚ್ಛ, ಆಗ್ನೇಯ ಕೃಚ್ಛ ಚಾಂದ್ರಾಯಣ, ಗೋವ್ರತ, ಅಶ್ವಮೇಧಾವಭೃತಸ್ನಾನ, ಪಂಚಗವ್ಯ. ಸೋಮಾಯನ ಪ್ರಜಾಪತ್ಯ- ಇವು ಪ್ರಾಯಶ್ಚಿತ್ತ ವಿಧಾನಗಳು, ಪ್ರಾಯಶ್ಚಿತ್ತವನ್ನು ಬಹಿರಂಗವಾಗಿ ಮಾಡಿಕೊಳ್ಳುವುದೂ ಗುಪ್ತವಾಗಿ ಮಾಡಿಕೊಳ್ಳುವುದೂ ಉಂಟು. ಪ್ರಾಣಾಯಾಣ ಧರ್ಮಗ್ರಂಥಗಳ ಪಾರಾಯಣ ದಾನ ಹೋಮ ಜಪ ಇವುಗಳಲ್ಲಿ ನಿರತನಾದವನಿಗೆ ಪಾಪ ಅಂಟುವುದಿಲ್ಲ. ಕಾಲಕ್ರಮೇಣ ಪ್ರಾಯಶ್ಚಿತ್ತದ (ತಪಸ್ಸಿನ) ಕಾಠಿಣ್ಯವನ್ನು ಕಡಿಮೆ ಮಾಡಲಾಗುತ್ತ ಬರೆಯಲಾಯಿತು. ಪಶ್ಚಾತ್ತಾಪ ವಿಧಿಯಿಂದ ಪ್ರಾಣಾಪಾಯವಾಗಬಾರದು ಎಂಬ ಅಭಿಪ್ರಾಯ ಬೆಳೆಯಿತು.

ಪ್ರಾಯಶ್ಚಿತ್ತ ಲೋಪದಿಂದ ನರಕ ಪ್ರಾಪ್ತಿ, ಜನ್ಮಾಂತರದಲ್ಲಿ ಹೀನಸ್ಥಿತಿ ಎಂದು ಸ್ಮøತಿಗಳಲ್ಲಿದೆ. ಅತಿಪಾತಕ ಮಹಾಪಾತಕ ಅನುಪಾತಕ ಉಪಪಾತಕ ಜಾತಿಭ್ರಂಶ ಮುಂತಾದ ಪಾತಕಗಳಿಗೆ ಕ್ರಿಮಿಕೀಟಾದಿ ಜನ್ಮಪ್ರಾಪ್ತಿ ಎಂದು ಬೋಧಿಸಲಾಗಿದೆ. 

	ತಪ್ಪೊಪ್ಪಿಗೆ ಮತ್ತು ಪ್ರಾಯಶ್ಚಿತ್ತ ಎಲ್ಲ ಜನಾಂಗಗಳಲ್ಲೂ ಉಂಟು.
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ